ಗಂಡು ಮೆಟ್ಟಿನ ನಾಡಿನ ಗಂಡುಗಲಿ ಮದಕರಿ ನಾಯಕ

ರಾಜಾಧಿರಾಜ ರಾಜಮಾರ್ತಾಂಡ
ಕಾಮಗೇತಿ ಕಸ್ತೂರಿ ಕುಲತಿಲಕ
ಶ್ರೀಮಾನ್ ಮಹಾನಾಯಕಾಚಾರ್ಯ
ಹಗಲು ಕಗ್ಗೊಲೆಮೂನ್ಯ ಗಂಡುಗೊಡಲಿಯ ಸರ್ಜಾ
ಗಾಧುರಿಮಲೆ ಹೆಬ್ಬುಲಿ ಚಂದ್ರಗಾವಿಛಲದಾಂಕ್ಯ
ಧೂಳಕೋಟೆ ವಜೀರ ಎಪ್ಪತ್ತೇಳು ಪಾಳೇಗಾರರ
ಮಿಂಡ ರಾಜಾವೀರ ಮದಕರಿನಾಯಕರಿಗೆ ಜಯೀಭವ ವಿಜಯೀಭವ

ಚಿತ್ರದುರ್ಗವೆಂದರೆ ಮದಕರಿನಾಯಕ ಮದಕರಿನಾಯಕನೆಂದರೆ ಚಿತ್ರದುರ್ಗವೆಂದೇ ಜನಜನಿತ.. ಕರ್ನಾಟಕದ ಇತಿಹಾಸದಲ್ಲಿ ಚಿತ್ರದುರ್ಗ ಇತಿಹಾಸಕ್ಕೆ ಮಹತ್ವದ ಸ್ಥಾನವಿದೆ. ದುರ್ಗದ ಪಾಳೆಗಾರರು ರೊಚ್ಚು ಕೆಚ್ಚು ಆವೇಶ ಆಕ್ರೋಶ, ವೀರಶೌರ್ಯ, ಪರಾಕ್ರಮಗಳಿಗೆ ಹೆಸರಾದಂತೆ ಧರ್ಮಾನುಯಾಯಿಗಳೂ ಆಗಿದ್ದರೆಂಬುದು ಉಲ್ಲೇಖನಾರ್ಹ. ಈ ಮಾತಿಗೆ ಅವರುಗಳು ಸಂಸ್ಥಾಪಿಸಿದ ಅಷ್ಟಮಠಗಳೇ ಸಾಕ್ಷಿ. ದುರ್ಗವನಾಳಿದ ಹನ್ನೊಂದು ದೊರೆಗಳಲ್ಲಿ ಕಡೆಯ ರಾಜವೀರ ಗಂಡುಗಲಿ ಮದಕರಿನಾಯಕನು ಪ್ರಬಲನು ಪರಾಕ್ರಮಿಯೂ ಆಗಿದ್ದನಲ್ಲದೆ ಪರಧರ್ಮಸಹಿಷ್ಣು.

೧೨ ವರ್ಷಕ್ಕೇ ಪಟ್ಟ !
ಮಾಯಕೊಂಡದ ಕಾಳಗದಲ್ಲಿ ಮಡಿದ ಹಿರೇಮದಕರಿನಾಯಕರ ಮಗ ಕಸ್ತೂರಿ ರಂಗಪ್ಪನಾಯಕನಿಗೆ ಸಂತಾನ ಭಾಗ್ಯವಿಲ್ಲದ್ದರಿಂದ ಆತನ ತಾಯಿ ಹಿರೇಮದಕರಿಯ ಧರ್ಮಪತ್ನಿ ಗಂಡಿಲ ಓಬವ್ವನಾಗತಿಯು ಗಂಡನ ಸೋದರ ಸಂಬಂಧಿ ಜಾನಕಲ್ಲಿನ ತೊದಲು ಭರಮಪ್ಪ ನಾಯಕನ ಮಗ ಮದಕರಿನಾಯಕನನ್ನೇ ಪಟ್ಟಕ್ಕೆ ಆರಿಸಿ ತಂದಳು. ಕಸ್ತೂರಿ ರಂಗಪ್ಪನಾಯಕನು ಕನಸಲ್ಲಿ ಕಾಣಿಸಿಕೊಂಡು ತಾನು ತೊದಲು ಭರಮಪ್ಪನಾಯಕನ ಮಗನಾಗಿ ಜಾನಕಲ್ಲಿನಲ್ಲಿ ಜನಿಸಿದುದಾಗಿ ಸೂಚಿಸಿದನೆಂದು ನಂಬಿಸಿ ದೊಡ್ಡಮದಕರಿನಾಯಕನಿಗೆ ಪಟ್ಟವಾಗುವುದನ್ನು ತಪ್ಪಿಸಿದ ನಾಗತಿ, ಚಿಕ್ಕಮದಕರಿಯು ೧೨ ವರ್ಷದವನಿರುವಾಗಲೇ ಸಿಂಹಾಸನಾರೋಹಣ ಮಾಡಿಸಿ ದುರ್ಗದ ಉಸ್ತುವಾರಿಗೆ ನಿಂತ ಧೀರೋಧಾತ ಮಹಿಳೆ ಗಂಡಿನಂತೆ ಕತ್ತಿ ಇರಿದು ಹೋರಾಡುವ ಅಜ್ಜಿಯ ಜೊತೆ ಗಂಡು ಸಿಂಹದಂತೆಯೇ ಬೆಳೆದ ‘ವಜ್ರಾದಪಿಕಡೋರಾಣಿ ಕುಸುಮಾದಪಿ ಮೃದುನೀ’ ಎಂಬ ಮಾತಿಗೆ ಪ್ರತ್ಯಕ್ಷಸಾಕ್ಷಿ ಎಂಬಂತೆ ದುರ್ಗವನಾಳಿದ ಮದಕರಿಗೆ ಯುದ್ಧವೆಂದರೆ ಚದುರಂಗದಾಟ.

ಅರಿಭಯಂಕರ : ದುರ್ಗದವರಿಗೆ ಮೊದಲಿನಿಂದಲೂ ಸುತ್ತಮುತ್ತಲ ಸ್ವಜಾತಿ ಪಾಳೇಗಾರರೇ ಪರಮಶತ್ರುಗಳಾಗಿದ್ದರು. ಹರಪನಹಳ್ಳಿ, ರಾಯದುರ್ಗ, ಜರಿಮಲೆ, ಪಾಳೆಗಾರರು ಅಂಗೈನ ಹುಣ್ಣಾದರೆ, ಸವಣನೂರು, ತರೀಕೆರೆ, ಕನಕಗಿರಿ ಪಾಳೇಗಾರರು ಪ್ರಗತಿಯ ಹಾದಿಗೆ ಮುಳ್ಳಾದವರು. ಅಲ್ಲದೆ ನವಾಬ್ ಹೈದರಾಲಿಖಾನನ ವಶಕ್ಕೆ ಒಳಪಡದ ಒಂದೇ ಒಂದು ಪಾಳೆಪಟ್ಟಂದರೆ ಚಿತ್ರದುರ್ಗ ಮಾತ್ರ, ಪುಡಿ ಪಾಳೇಗಾರರು ಹೈದರಾಲಿಯ ಗೆಳೆತನ ಮಾಡುವ ಮೊದಲೆ ನಾಯಕ ಹೈದರಾಲಿಯೊಂದಿಗೆ ಕೈಕುಲುಕಿದ ಚಾಣಾಕ್ಷ ಆತನನ್ನು ಮೆಚ್ಚಿಸಲೆಂದೇ, ತನ್ನ ಭುಜಬಲ ಪರಾಕ್ರಮವನ್ನು ಪ್ರದರ್ಶಿಸಲೆಂದೋ ಅಥವಾ ತನ್ನ ತಂಟೆಗೆ ಬಾರದಿರಲೆಂದೋ ಆತನಿಗಾಗಿ ಅನೇಕ ಯುದ್ಧಗಳನ್ನು ಮಾಡಿ ಸೀಮೆಗಳನ್ನು ಗೆದ್ದುಕೊಟ್ಟನು. ಬಿದನೂರು, ಬಸವಾಪಟ್ಟಣ, ಬಂಕಾಪುರದ ಕೋಟೆಯನ್ನು ಹಿಡಿದು ಹೈದರಾಲಿಗೆ ಠಾಣೆಹಾಕಿಸಿಕೊಟ್ಟನು. ಕ್ರಿ.ಶ. ೧೭೬೪ರಲ್ಲಿ ಹೈದರಾಲಿಗೂ ಮರಾಠರ ಪೇಷ್ವೆ ಮಾಧವರಾಯನಿಗೂ ಕದನವೇರ್ಪಟ್ಟಾಗ ಮದಕರಿಯು ನವಾಬನಿಗೆ ಸಹಾಯವಾಗಿ ನಿಂತು ಯುದ್ಧದಲ್ಲಿ ಗೆಲುವಂತೆ ಮಾಡಿದನಲ್ಲದೆ ನಿಜಗಲ್ಲು ದುರ್ಗಗಳನ್ನು ಠಾಣೆ ಮಾಡಿಸಿಕೊಟ್ಟನು. ಇದರಿಂದಾಗಿ ಮದಕರಿನಾಯಕನು ಇತರೆ ಪಾಳೆಗಾರರ ಪಾಲಿಗೆ ಅರಿಭಯಂಕರನಾದ. ಹೈದರಾಲಿಖಾನನು ತನಗೆ ಎಷ್ಟೇ ಮಾನ ಸನ್ಮಾನಗಳನ್ನು ಮಾಡಿದರೂ ಇಂವಾ ಎಂದಿದ್ದರೂ ಮಾಂಸದಲ್ಲಿನ ಮೂಳೆಯಂದರಿತಿದ್ದ ಮದಕರಿ ನವಾಬನನ್ನು ಹತೋಟಿಯಲ್ಲಿಡಲು ಮರಾಠರೊಡನೆಯೂ ಮಿತ್ರುತ್ವ ಬೆಳೆಸಿದ ಮಹಾಮುತ್ಸದ್ದಿ ಪೇಷ್ವೆ ಮಾಧವರಾಯನು ತನ್ನಿಂದ ಸಾಧಿಸಲಸಾಧ್ಯವೆನಿಸಿದ್ದ ಹೈದರನಿಗೆ ಸೇರಿದ ಸಾವನದುರ್ಗ, ಹುತ್ತರಿದುರ್ಗ, ನುಗ್ಗೆಹಳ್ಳಿ, ಹಾಗಲವಾಡಿ, ಬಾಣಾವರ, ಮೊದಲಾದ ಕೋಟೆಗಳನ್ನು ಆಕ್ರಮಿಸಿದನಲ್ಲದೆ ೧೭೬೯ರಲ್ಲಿ ತುರುವೇಕೆರೆ ಬೆಳ್ಳೂರು, ಕೋಲಾರ, ಮುಳುಬಾಗಿಲು, ದೇವರಾಯನದುರ್ಗ, ಚಿಕ್ಕಬಳ್ಳಾಪುರಗಳಿಗೂ ಠಾಣೆಹಾಕಿದನು, ಇದಾರಿಂದಾಗಿ ಹೈದರಾಲಿಯ ಅಂತರಂಗದಲ್ಲಿ ಮದಕರಿಯನ್ನು ದ್ವೇಷಿಸಹತ್ತಿದ.

ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳದೆ ಮಾಡಿಕೊಂಡ ಇಂತಹ ಸ್ನೇಹ ಸಮರಗಳೇ ಮುಂದೆ ಮದಕರಿಗೆ ಮುಳುವಾದವು. ಹೊರಗಿನ ಶತ್ರುಗಳಲ್ಲದೆ, ಒಳಗಿನ ಶತ್ರುಗಳೂ ಆಡಳಿತದಲ್ಲಿ ನುಸುಳಿದ್ದರಿಂದ ಅಂತ್ಯದಲ್ಲಿ ವಂಚನೆಗೊಳಗಾದ ನಾಯಕ ಎಲ್ಲರನ್ನೂ ಅನುಮಾನಿಸುವಂತಾದ. ಎಲ್ಲರ ಮೇಲೂ ಆಕ್ರೋಶವೆ ಹಾರಾಟವೆ ! ಪ್ರಧಾನಿಯಾಗಿದ್ದ ಕಳ್ಳಿನರಸಪ್ಪ ತನಗೆ ಉಪ್ಪಿಟ್ಟ ಮನೆಗೇ ಕಿಚ್ಚಿಟ್ಟಮೊದಲಿಗ.

ಮುರುಗೇಸ್ವಾಮಿಗಳ ಅವಕೃಪೆ : ತನ್ನ ತಾತ ಮುತ್ತಾತಂದಿರು ನಂಬಿನಡೆದ ಬೃಹನ್ಮಠದ ಅವಕೃಪೆಗೆ ಒಳಗಾಗಲು ಅಹಂಕಾರ ಒಂದುಕಡೆಯಾದರೆ ಅಸಹಾಯಕತೆ ಅಪನಂಬಿಕೆಗಳೂ ಕಾರಣವಾಗಿದ್ದಿರಬಹುದು. ಮಹಾಸ್ವಾಮಿಗಳ ಕೃಪಾಶೀರ್ವಾದ ಗಳಿಗಾಗಿ ಶತ್ರು ಪಾಳೇಗಾರರ ಸೀಮೆಯ ಜನರೂ ಬೃಹನ್ಮಠಕ್ಕೆ ಬಂದು ಹೋಗುತ್ತಿದ್ದುದುಂಟು. ಮಠಕ್ಕೆ ಬರುವ ಭಕ್ತರನ್ನು ತಡೆವುದಾದರೂ ಹೇಗೆ ? ಮುಸಲ್ಮಾನರು, ಮರಾಠರು ಆಜನ್ಮಶತ್ರುಗಳಾಗಿರುವಾಗ ಈರ್ವರ ಸ್ನೇಹಗಳಿಕೆ ಎರಡು ದೋಣಿಯಲ್ಲಿ ಪಯಣಿಸಿದಂತೆ ಗಂಡಾಂತರವೆಂದ ಸ್ವಾಮಿಗಳ ಸಲಹೆಯಾಗಲಿ, ಯುದ್ದದಾಹ ಭೂಮಿಪಾಶ ಒಳ್ಳೆಯದಲ್ಲವೆಂಬ ಉಪದೇಶವಾಗಲಿ ಸದಾ ಕಾದಾಡಲೆಂದೇ ಹುಟ್ಟಿದ ನಾಯಕನಿಗೆ ಹಿಡಿಸಿತಾದರೂ ಹೇಗೆ ? ಇಂತಹ ಮನಸ್ಸಿನ ಕಿರಿಕಿರಿಗಳೇ ದೊರೆ ಮತ್ತು ಗುರುವಿನ ಮಧ್ಯೆ ಮಹಾಕಂದರವಾಗಿ ಪರಿಣಮಿಸಿರಾಲೂಬಹುದು. “ಹಂಗಿನರಮನೆಗಿಂತ ಭಂಗುರದ ಗುಡಿಲೇಸು” ಎಂದು ಸ್ವಾಮಿಗಳು ದುರ್ಗವನ್ನೇ ಬಿಟ್ಟರು. ಆದರೆ ತನ್ನ ಕಡೆಯ ಉಸಿರಿರುವ ತನಕ ದುರ್ಗವನ್ನು ಬಿಡದೆ, ದುರ್ಗದ ಒಂದಂಗುಲ ನೆಲವನ್ನೂ ಮುಸುಲರಿಗೆ ಬಿಟ್ಟುಕೊಡದೆ ಅತ್ಯುಗ್ರಹೋರಾಟ ನಡೆಸಿದ ಮದಕರಿನಾಯಕ ಎಂದಿಗೂ ನಾಯಕಕುಲತಿಲಕನೆಂದೇ ಪ್ರಖ್ಯಾತ.

ಹೈದರಾಲಿಯ ಮಿತ್ರ ದ್ರೋಹ: ಮದಕರಿಯ ಏಳಿಗೆಯನ್ನು ಸಹಿಸದಂತಾದ ಹೈದರಾಲಿ ಬೇಕೆಂದೇ ಎರಡು ಲಕ್ಷವರಹ ಪೊಗದಿಕೊಡಲು ಆಜ್ಞಾಪಿಸಿದ. ಆಜ್ಞೆ ಮಾಡಿ ಮಾತ್ರವೇ ಅನುಭವವಿದ್ದ ನಾಯಕ ತಿರಸ್ಕರಿಸಿದ. ಕಾಲು ಕೆದರಿ ಕದನಕ್ಕೆ ನಿಂತ ಹೈದರ ದುರ್ಗವನ್ನು ವಶಪಡಿಸಿಕೊಳ್ಳಬೇಕೆಂಬ ಹಣದಲ್ಲಿ ನಾಲ್ಕುಬಾರಿ ಯುದ್ಧಸಾರಿದ. ೧೭೬೨, ೧೭೭೪ ಮತ್ತು ೧೭೭೭ರಲ್ಲಿ ದಂಡೆತ್ತಿ ಬಂದ ನವಾಬ ಮೂರು ಯುದ್ಧಾಗಳಲ್ಲು ಹಿಮ್ಮೆಟ್ಟಿದ. ಮದಕರಿಯನ್ನು ಪರಾಕ್ರಮದಿಂದ ಮಣಿಸಲು ಅಸಾಧ್ಯವೆಂದರಿತಾಗ ಕುತಂತ್ರಕ್ಕೆ ಮೊರೆಹೋದ. ಹೈದರಾಲಿಯ ಹಣ ಪದವಿಗಳ ಆಮಿಷಕ್ಕೆ ಬಲಿಯಾದ ಪ್ರಧಾನಿ ಕಳ್ಳಿನರಸಪ್ಪ ತನ್ನ ಸಮಾನ ಮನಸ್ಕರೊಂದಿಗೆ ಮೊಹರಂ ಹಬ್ಬದಂದು ಮೊಹರಂ ವೇದದಲ್ಲಿ ದುರ್ಗವನ್ನು ಬಿಟ್ಟು ಹೈದರಾಲಿಯ ಪಡೆ ಸೇರಿದ.

ದುರ್ಗಮವಾದ ಏಳುಸುತ್ತಿನ ಕೋಟೆ ಚಿತ್ರಕಲ್ ದುರ್ಗವನ್ನು ಪ್ರವೇಶಿಸಲು ಅನುಕೂಲಕರವಾದ ಕಳ್ಳಗಿಂಡಿಗಳ ರಹಸ್ಯ ಬಯಲಾದಾಗ ಹೈದರನಿಗೆ ದುರ್ಗವನ್ನು ಬೇಧಿಸುವುದು ಅಷ್ಟೇನು ಕಷ್ಟವೆನ್ನಿಸಲಿಲ್ಲ. ದುರ್ಗದ ಸೇನೆಯಲ್ಲಿಯೂ ಹಲವರು ಹೈದರನ ಹಣ ಅಧಿಕಾರಲಾಲಸೆಗೆ ಬಲಿಬಿದ್ದು ಮದ್ದುಗುಂಡುಗಳು ಹಾರದಂತೆ ಎಣ್ಣೆಸುರಿದರು. ಕತ್ತಿ, ಗುರಾಣೆ, ಬಾಣ, ಭರ್ಜಿ, ಈಟಿಗಳನ್ನು ಮುಕ್ಕಾಗಿಸಿದರು. ಯುದ್ಧ ಮಾಡದೆ ಕಾಲಹರಣ ಮಾಡಿದರು. ನೆರವಿಗೆ ಬರುತ್ತೇನೆಂದ ಪೇಶ್ವೇ ಮಾಧವರಾಯ ಸಮಯದಲ್ಲಿ ಬಾರದೆ ಕೈಕೊಟ್ಟ. ಸುತ್ತಲಿನ ಪಾಳೇಗಾರರೆಲ್ಲರೂ ಹೈದರನ ಪರವಾಗಿ ನಿಂತರು. ಇಂತಹ ಅನೇಕ ಒಳಸಂಚುಗಳಿಂದ ಜರ್ಝರಿತನಾದರು ಧೃತಿಗೆಡದೆ ಗಂಡುಮೆಟ್ಟಿನನಾಡನ್ನು ಉಳಿಸಿಕೊಳ್ಳಲು ಏಕಾಂಗಿಯಾಗಿ ಕಾದಾಡಿದ ಮದಕರಿ – ರಣಕಲಿ.

ವಿವಾದಾಸ್ಪದ ಅಂತ್ಯ: ೧೭೭೯ ರಲ್ಲಿ ನಡೆದ ಕದನದಲ್ಲಿ ಹೈದರನು ಮದಕರಿಯನ್ನು ಮೋಸದಿಂದಲೇ ಸೆರೆಹಿಡಿದನೆಂದು ಇತಿಹಾಸ ಹೇಳುತ್ತದೆ. ರಾಜಿಯಾಗುವ ನೆಪದಲ್ಲಿ ಔತಣಕೂಟಕ್ಕೆ ಕರೆದ ಹೈದರ ಅನ್ನದಲ್ಲಿ ವಿಷವಿಟ್ಟು ಕೊಂದನೆಂತಲೂ, ಯುದ್ಧದಲ್ಲಿ ಹತಾಶೆಗೊಂಡ ನಾಯಕ ತನ್ನ ಏಕನಾಥಿ ಖಡ್ಗವನ್ನು ಮೇಲಕ್ಕೆ ತೂರಿ ಎದೆಒಡ್ಡಿದನೆಂತಲೂ ಶಂಕಿಸಲಾಗಿದೆ. ಹೈದರನು ಮದಕರಿಯನ್ನು ಅವನ ೨೦ ಸಾವಿರಾ ಖಾಸಾ ಬೇಡರ ಪಡೆಯೊಂದಿಗೆ ಬೆಟ್ಟದ ಮೇಲಿನಿಂದ ದೂಡಿಸಿದನೆಂತಲೂ ಹೇಳುವ ಇತಿಹಾಸ, ಹೈದರನ ಸೆರಮನೆಯಲ್ಲಿ ನಾಯಕ ಕೊರಗಿ ಕೃಶನಾಗಿ ಸತ್ತನೆಂತಲೂ ತಿಳಿಸುತ್ತದೆ. ಅದೇನೇ ಇರಲಿ ೧೭೫೪ ರಿಂದ ೧೭೭೯ರ ವರೆಗೆ ದುರ್ಗವನಾಳಿದ ಸುಮಾರು ೩೭ ವರ್ಷದವನಿರುವಾಗಲೆ ಮಡಿದ ಮದಕರಿಯ ಶೌರ್ಯ ಕ್ರೌರ್ಯ ಪರಾಕ್ರಮಗಳ ಬಗ್ಗೆ ದುರ್ಗದವರಿಗೆ ಇಂದಿಗೂ ತುಂಬು ಗೌರವ. ಅದಕ್ಕೆ ಪುರಾವೆಯೆಂಬಂತೆ ತಡವಾದರೂ ಅಶ್ವವನ್ನೇರಿದ ಸುಮಾರು ೧೩ ಅಡಿ ಎತ್ತರದ ಆ ಮಹಾನಾಯಕಾಚಾರ್ಯನ ಬಾರಿ ಕಂಚಿನ ಪ್ರತಿಮೆ ಇದೀಗ ಅನಾವರಣಗೊಳ್ಳುತ್ತಿದೆ. ಇದು ಇತಿಹಾಸ ಕಂಡ ಸಂಭ್ರಮದ ದಿನ.

ಈಟೀಟು ಹುಡುಗಾರು
ಚೀಟಿ ಚೆಲ್ಲಣದೋರು
ಕೋಟಿ ಕೊಟ್ಟೆನೆಂದಾರು
ಕೋಟೆ ಕೊಡನೆಂದರು

ದುರ್ಗದವರಿಗೆ ತಮ್ಮ ಇತಿಹಾಸ, ಪಾಳೇಗಾರರ ಪೌರುಷದ ಬಗ್ಗೆ ಅದೆಷ್ಟು ಅಭಿಮಾನವೆಂಬುದಕ್ಕೆ ಈ ಪುಟ್ಟ ಜಾನಪದ ಗೀತೆಯ ಸಾಲುಗಳೇ ಸಾಕಲ್ಲವೆ .
(ನೆರವು : ಚಿತ್ರದುರ್ಗದ ನಾಯಕ ಅರಸರು)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯತ್ಯಾಸ
Next post ಗಂಟಲಲ್ಲಿ ಸಿಕ್ಕಿಕೊಂಡ ಹೊಟ್ಟೆ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys